ಏಳಿ, ಎದ್ದೇಳಿ !

ಕನ್ನಡ ಜನರೆ, ಏಳಿ! ಎದ್ದೇಳಿ! ಎದ್ದೇಳಿ! ಬೌದ್ಧಿಕರೆಂದು ಕರೆದುಕೊಳ್ಳುವ ಜನರೂ ರಾಜಕಾರಣಿಗಳೂ ವಿಶ್ವಭ್ರಾತೃತ್ವ, ಭಾರತದ ಅಖಂಡತೆ, ಭಾಷಾಂಧತೆ ಇತ್ಯಾದಿ ಮಾತುಗಳಿಂದ ನಮ್ಮನ್ನು ವಂಚಿಸಲು ಯತ್ನಿಸುತ್ತಿರುವ ಬಗ್ಗೆ ಜಾಗೃತರಾಗಿರಿ. ಕನ್ನಡಿಗ ಎಂದೂ ಭಾಷಾಂಧನಲ್ಲ. ಅವನು ಎಂದೂ ದೇಶದ್ರೋಹಿಯಲ್ಲ. ನಿಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಇರಲಿ. ತನ್ನತನವನ್ನು ಉಳಿಸಿಕೊಳ್ಳದ ಪ್ರಾಂತಕ್ಕೆ ಉಳಿಗಾಲಿವಿಲ್ಲ. ಅನ್ಯಭಾಷೀಯ ಸೋದರರ ಬಗ್ಗೆ ಗೌರವವಿಡೋಣ. ಆದರೆ ಅನ್ಯಭಾಷೀಯ ಸೋದರರು ಕರ್ನಾಟಕ್ಕೆ ಬಂದು ಕರ್ನಾಟಕವು ತಮ್ಮ ವಸಾಹತುಗಳಾಗುವಂತೆ ಮಾಡುತ್ತಿದ್ದಾರೆ. ಇದನ್ನು ತಡೆಯದಿದ್ದರೆ ಕರ್ನಾಟಕವು ಸರ್ವನಾಶವಾಗುತ್ತದೆ. ಧೀರರಾದ ಅಸ್ಸಾಮ್ ಯುವಕರು ಹೋರಾಡಿ ತಮ್ಮ ಪ್ರಾಂತ್ಯವನ್ನು ವಿನಾಶದಿಂದ ತಪ್ಪಿಸಿದರು. ಅಂತಹ ಹೋರಾಟಕ್ಕೆ ಕನ್ನಡದ ಜನ ಸಿದ್ಧವಾಗಬೇಕಾಗಿದೆ. ಗಡಿಗಳಲ್ಲಿ ಮರಾಠಿಗರು, ತಮಿಳರು, ಮಲೆಯಾಳಿಗಳು ಕನ್ನಡವನ್ನು ಲೆಕ್ಕಿಸುತ್ತಿಲ್ಲ. ಭವಿಷ್ಯದ ಬೆಂಗಳೂರು ಗಾಬರಿಯನ್ನು ಹುಟ್ಟಿಸುತ್ತದೆ. ಹಿಂದಿ ಅಧಿಕೃತಭಾಷೆಯ ಹೆಸರಲ್ಲಿ ವಿಜೃಂಭಿಸುತ್ತಿದೆ. ಕೇಂದ್ರದಲ್ಲಿ ಕನ್ನಡಿಗರ ಧ್ವನಿ -ದುರ್ಬಲದ ಮಾತಿರಲಿ -ಅದು ಇಲ್ಲವೇ ಇಲ್ಲ. ಇಂತಹ ಸಂದರ್ಭದಲ್ಲಿ ಕನ್ನಡ ಜನ ಒಗ್ಗಟಿನಿಂದ ನಿಂತು ತಮ್ಮೆಲ್ಲ ಶಕ್ತಿಯನ್ನು ಬಳಸಿ ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳಬೇಕಾಗಿದೆ. ೧೯೫೬ರಲ್ಲಿ ಭಾಷಾವಾರು ಪ್ರಾಂತಗಳ ವಿಂಗಡಣೆಯಾಗಿ, ಹತ್ತೊಂಬತ್ತು ಜಿಲ್ಲೆಗಳ ಕರ್ನಾಟಕವು ಉದಯ ಆಯಿತು. ಅದು ಇನ್ನೂ ಕುಗ್ಗದಂತೆ ಮಾಡೋಣ. ಕರ್ನಾಟಕದಲ್ಲಿ ಕನ್ನಡವು ರಾಜರಾಜೇಶ್ವರಿಯಾಗಿ ಮೆರೆದು ಭಾರತೀಯ ಸಂಸ್ಕೃತಿಯ ವಜ್ರ ಮಕುಟದಂತೆ ಬೆಳಗಲಿ ಎಂದು ಹಾರೈಸೋಣ. ಅದಕ್ಕಾಗಿ ಶ್ರಮಿಸೋಣ. ಭವಿಷ್ಯದತ್ತ ಕಣ್ಣು ನೆಟ್ಟು ನಮ್ಮ ಹಿಂದಿನ ಸಂಸ್ಕೃತಿಯಿಂದ ಸ್ಫೂರ್ತಿಯನ್ನು ಪಡೆದು ಮುನ್ನಡೆಯೋಣ.
ಇಂದು ಅಗತ್ಯವಾಗಿರುವುದು ಒಗ್ಗಟ್ಟು. ಒಕ್ಕಲಿಗ, ಲಿಂಗಾಯತ, ಬೇಡ, ಕುರುಬ, ಬ್ರಾಹ್ಮಣ, ದಲಿತ, ಮುಸಲ್ಮಾನ, ಕ್ರಿಶ್ಚಿಯನ್ ಎಂಬ ಬೇಧವಿಲ್ಲದೆ, ಜನತಾದಳ, ಕಾಂಗ್ರೆಸ್, ಬಿಜೆಪಿ ಎಂಬ ಬೇಧವಿಲ್ಲದೆ ಎಲ್ಲ ಕನ್ನಡದ ಜನ ಕನ್ನಡದ ಉಳಿವು ಬೆಳವಣಿಗೆಗಾಗಿ ಒಂದಾಗುವುದು ತೀರ ಅಗತ್ಯ. ಪಂಪನಲ್ಲಿ ಒಂದು ಪ್ರಸಂಗ: ದುರ್ಯೋಧನನು ಭೀಷ್ಮನಿಗೆ ಸೇನಾಪತಿ ಪಟ್ಟವನ್ನು ಕಟ್ಟಿ ಶತ್ರುಗಳನ್ನು ತನ್ನ ಮಂಚದ ಕಾಲಿಗೆ ಕಟ್ಟಿದೇನೆಂದು ಬೀಗುತ್ತಾನೆ. ಭೀಷ್ಮರು ವೃದ್ಧರೂ ಪಾಂಡವ ಪಕ್ಷಪಾತಿಗಳೂ ಆದುದರಿಂದ ಯುದ್ಧದಲ್ಲಿ ಕಾದಾಡಲಾರರು; ಆ ಕಾರಣ ತನಗೆ ಪಟ್ಟಕಟ್ಟಬೇಕೆಂಬ ಕರ್ಣನ ಮಾತಿನಿಂದ ಸಿಡಿದೆದ್ದ ದ್ರೋಣರು ಆತ ಹೀನ ಕುಲದವನೆಂದು ಹೀಯಾಳಿಸಿ, “ನಾಲಗೆ ಕುಲವನ್ನು ಹೇಳಿತು” ಎಂದು ಅವಮಾನಿಸುತ್ತಾರೆ. “ಕುಲಂ ಕುಲಮಲ್ತು, ಚಲಂ ಕುಲಂ, ಗುಣಂ ಕುಲಂ, ಅಭಿಮಾನಂ ಅದೊಂದೆ ಕುಲಂ..” ಹುಟ್ಟಿದ ಕುಲವು ನಿಜವಾದ ಕುಲವಲ್ಲ. ಚಲವೇ ಕುಲ, ಗುಣವೇ ಕುಲ, ಅಭಿಮಾನ ಒಂದೇ ಕುಲ. ಪಂಪನ ಈ ಕುಲದ ವ್ಯಾಖ್ಯೆ ನಮಗೆ ಪ್ರಸ್ತುತವಾದುದು. ಹುಟ್ಟಿನಿಂದ ನಾವು ಬೇರೆ ಬೇರೆ ಜಾತಿಯವರಾದರೂ ನಾವು ಚಲ, ಗುಣ, ಅಭಿಮಾನಗಳೆಔಟ್ಹ; ಕುಲವೆಂದು ಸಾರಿದ ಪಂಪನ ನಾಡಿನವರು. ನಮ್ಮದು ಅಭಿಮಾನದ ಕುಲ; ಸ್ವಾಭಿಮಾನವನ್ನು ಎತ್ತಿ ಹಿಡಿದ ಕನ್ನಡ ಕುಲ. ಯಾವನು ಸ್ವಾಭಿಮಾನಿಯಲ್ಲವೋ ಅವನು ಕನ್ನಡಿಗ ಅಲ್ಲ. ಇದು ನಮ್ಮ ದಾರಿದೀಪವಾಗಿರಲಿ. ತನ್ನ ಒಳಗೇ ಆಳವಾದ ಕೊರಗಿನಿಂದ ನೊಂದು ಬಸವಳಿದಿದ್ದಾಳೆ ಕನ್ನಡ ದೇವಿ. ಅವಳ ನೋವು ಒಳಗಣ್ಣಿಗೆ ಕಾಣುತ್ತಿದ; ಒಳಗಿವಿಗೆ ಕೇಳುತ್ತಿದೆ. ಆ ತಾಯಿ ತನ್ನ ಬಿಡುಗಡೆಗಾಗಿ ತನ್ನ ಮಕ್ಕಳಿಗೆ ಕರೆಯನ್ನು ಕೊಡುವ ಕಾಲವೂ ಬಂದೀತು. ಆ ಕಾಲ ಬಹುಬೇಗ ಬರಲಿ ಎಂದು ಕನ್ನಡ ಸೋದರರೇ ದಯಮಾಡಿ ಪ್ರಾರ್ಥಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ